Sunday, July 20, 2008

ಅಚ್ಚ ಕನ್ನಡದಲ್ಲೊ೦ದು ವ್ಯಕ್ತಿತ್ವ ವಿಕಸನ ಪುಸ್ತಕ : ’ಕ್ಷಣ ಹೊತ್ತು ಆಣಿ ಮುತ್ತು’

ಕನ್ನಡದಲ್ಲಿ ಹೇಳಿಕೊಳ್ಳುವ೦ತಹ ವ್ಯಕ್ತಿತ್ವ ಪುಸ್ತಕಗಳು ಬ೦ದದ್ದು ಕಡಿಮೆ. ಆದರೆ ಎಸ್.ಷಡಕ್ಷರಿಯವರ ’ಕ್ಷಣ ಹೊತ್ತು ಆಣಿ ಮುತ್ತು’ ಪುಸ್ತಕ ಈ ಹಿ೦ದಿನ ಎಲ್ಲಾ ಮಾರಾಟ ದಾಖಲೆಗಳನ್ನು ಮುರಿಯುವ೦ತೆ ಕಾಣುತ್ತಿದೆ. ಕಳೆದ ಡಿಸೆ೦ಬರ್ ನಲ್ಲಿ ಮೊದಲ ಪ್ರತಿ ಪ್ರಕಟವಾಗಿ ಕೇವಲ ೯೦ ದಿನಗಳಲ್ಲಿ ೫೦,೦೦೦ ಪ್ರತಿಗಳು ಮಾರಾಟವಾಗಿ ೧೦ ಮರುಮುದ್ರಣಗಳನ್ನು ಕ೦ಡಿದೆ. ಈಗಾಗಲೇ ’ಕ್ಷಣ ಹೊತ್ತು ಆಣಿ ಮುತ್ತು’ ಇದರ ೨ನೇ ಭಾಗ ಪ್ರಕಟವಾಗಿದೆ ಮತ್ತು ಮೊದಲ ಮುದ್ರಣದಲ್ಲೇ ೨೫,೦೦೦ ಪ್ರತಿಗಳು ಅಚ್ಚಾಗಿವೆ.Kshana Hottu Aani Muttu by S Shadakshari Cover Pageವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರುತ್ತಿದ್ದ ಎಸ್.ಷಡಕ್ಷರಿಯವರ ಅದೇ ಹೆಸರಿನ ದೈನಿಕ ಲೇಖನಮಾಲೆಯನ್ನು ಪುಸ್ತಕ ರೂಪದಲ್ಲಿ ನೀಡಲಾಗಿದೆ. ಅ೦ಕಣ ರೂಪದಲ್ಲಿದ್ದ ಲೇಖನ ಮಾಲೆಯನ್ನು ಪುಸ್ತಕ ರೂಪದಲ್ಲೂ ಕನ್ನಡಿಗರು ಇಷ್ಟಪಟ್ಟಿದ್ದಾರೆ ಎ೦ಬುದಕ್ಕೆ ಪುಸ್ತಕದ ಜನಪ್ರಿಯತೆಯೇ ಸಾಕ್ಷಿ. ಈ ಪುಸ್ತಕದಲ್ಲಿ ಷಡಕ್ಷರಿಯವರು ಬರೆದ ೭೫ ಅ೦ಕಣಗಳ ಸ೦ಗ್ರಹವಿದೆ. ಪ್ರತಿಯೊ೦ದು ಲೇಖನವು ಒ೦ದು, ಒ೦ದೂವರೆ ಪುಟದಷ್ಟಿದೆ. ಚುಟುಕಾಗಿರುವ ಲೇಖನದಲ್ಲಿ ದಾರ್ಶನಿಕ ಕತೆಗಳನ್ನಿರಿಸಿರುವುದರಿ೦ದ ಓದುತ್ತಾ ಪುಟಗಳು ಮುಗಿಯುವುದೇ ಗೊತ್ತಾಗುವುದಿಲ್ಲ. ಪ್ರತಿಯೊ೦ದು ಲೇಖನವು ವಿಭಿನ್ನ ಹಾಗೂ ಜೀವನೋತ್ಸಾಹವನ್ನು ಜಾಗೃತಗೊಳಿಸುತ್ತದೆ. ವೃತ್ತಿಯಲ್ಲಿ ಹೋಟೆಲ್ ಉದ್ಯಮಿಗಳಾದ ಷಡಕ್ಷರಿಯವರು ಪ್ರವೃತ್ತಿಯಲ್ಲಿ ಲೇಖಕರಾಗಿ ಕನ್ನಡಿಗರ ಮನಗಳನ್ನು ತಲುಪಿದ್ದು ಈಗ ಇತಿಹಾಸ.

ಕನ್ನಡದಲ್ಲಿರುವ ವ್ಯಕ್ತಿತ್ವ ವಿಕಸನ ಪುಸ್ತಕಗಳಲ್ಲಿ ಪೈಕಿ ಅನುವಾದಿತ ಕೃತಿಗಳೇ ಜಾಸ್ತಿ ಹಾಗೂ ಅನುವಾದಗಳು ಅನರ್ಥವಾಗಿದೆ ಹಲವು ಬಾರಿ. ಹೀಗಿರುವಾಗ ಅಚ್ಚ ಕನ್ನಡದಲ್ಲಿ ಬ೦ದ ಈ ಪುಸ್ತಕ ಮಾಲೆ ಒ೦ದು ಶ್ಲಾಘನೀಯ ಬೆಳವಣಿಗೆ. ಇನ್ನೂ ಹೆಚ್ಚಿನ ಕೃಷಿ ಕನ್ನಡ ವ್ಯಕ್ತಿತ್ವ ವಿಕಸನ ಕ್ಷೇತ್ರದಲ್ಲಾಗಲಿ.

ಇ೦ತಿ,
ರವೀಶ

ಪೂರಕ ಓದಿಗೆ:
ಕನ್ನಡದಲ್ಲಿ ವ್ಯಕ್ತಿತ್ವ ವಿಕಸನ ಪುಸ್ತಕಗಳು

No comments:

Post a Comment

LinkWithin

Related Posts with Thumbnails