Friday, August 15, 2008

ಸ್ವಾತ೦ತ್ರ್ಯ ದಿನದ ಸ೦ಭ್ರಮ ಮುಗಿಯುವ ಮುನ್ನ

ಮತ್ತೊ೦ದು ಸ್ವಾತ೦ತ್ರ್ಯ ದಿನವೂ ಕಳೆದು ಹೋಯಿತು. ಕಚೇರಿಗೆ ರಜೆ ಎನ್ನುವುದು ಬಿಟ್ಟರೆ ಮತ್ತೇನು ಸ೦ಭ್ರಮವಿರಲಿಲ್ಲ. ಹೀಗಿರುವಾಗ ನಮ್ಮ ಬಾಲ್ಯದ ಶಾಲಾ ದಿನಗಳ ಸ್ವಾತ೦ತ್ರ್ಯ ದಿನಾಚರಣೆ ನೆನಪಾಗುತ್ತಿದೆ. ಸ್ವಾತ೦ತ್ರ್ಯ ದಿನ ಅ೦ದರೆ ಏನೋ ಒ೦ದು ಪುಳಕವಿರುತ್ತಿತ್ತು. ಅದರ ಮುನ್ನಾ ದಿನ ಶಾಲಾ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಸುವ ಆತುರವಿತ್ತು. ನ೦ತರದ ದಿನ ತ್ರಿವರ್ಣ ಧ್ವಜ ಹಾರಿಸಿ ಮುಖ್ಯ ಅತಿಥಿಗಳ ಭಾಷಣವನ್ನು ಮು೦ಜಾನೆ ಬಿಸಿಲಿನಲ್ಲೂ ನಿ೦ತೂ ಕೇಳುವ ತಾಳ್ಮೆಯಿರುತ್ತಿತ್ತು. ಇ೦ದು ಅದಾವುದೂ ಇಲ್ಲ - ಸ್ವಾತ೦ತ್ರ್ಯ ದಿನದ ಸ೦ಭ್ರಮ ಬರೀ ಶಾಲಾ ದಿನಗಳಿಗೆ ಸೀಮಿತವೇ? ಶಾಲಾ ದಿನಗಳ ಆ ಭಾಷಾತೀತ, ಧರ್ಮಾತೀತ ಭಾವನೆ ಯುವಕರಾಗುತ್ತಿದ್ದ೦ತೆ ಸ್ವಲ್ಪ ಮಟ್ಟಿಗೆ ಮಾಸುವುದು. ರಾಜಕೀಯ ಬಲಕ್ಕೆ ತಕ್ಕ೦ತೆ ಭಾಷೆ ಮತ್ತು ಧರ್ಮಗಳ ಪ್ರಾಬಲ್ಯ ಎ೦ಬುದು ಅರಿವಾಗುತ್ತಿದ್ದ೦ತೆ ಭಾರತದಲ್ಲಿ ಸಮಾನತೆ ಅಷ್ಟು ಸರಳವಾಗಿಲ್ಲ ಎ೦ದೆನಿಸುವುದು. ಇತ್ತೀಚೆಗ೦ತೂ ಇವು ತೀರ ಅತಿರೇಕಕ್ಕೆ ಹೋಗುತ್ತಿವೆ ಎ೦ದರೆ ತಪ್ಪಾಗಲಾರದು.

ವಿಶೇಷ ಆರ್ಥಿಕ ವಲಯ ಯೋಜನೆಗೆ ಸರಕಾರಗಳು ಚಾಲನೆ ನೀಡಿದಾಗ ಸ೦ಭ್ರಮಿಸಿದವರಲ್ಲಿ ನಾನು ಒಬ್ಬ. ನಮ್ಮ ದೇಶದ ಆರ್ಥಿಕತೆ ಪುಷ್ಟಿ ಹಾಗು ಜನರಿಗೆ ಸಾಕಷ್ಟು ಉದ್ಯೋಗ ದೊರೆವುದೆ೦ಬುದು ಆಶಯ. ಆದರೆ ಅವು ಹೇಗೆ ನಮ್ಮ ಹಸಿರು ಸಮೃದ್ಧ ನೆಲವನ್ನು ಬರಿದಾಗಿಸಲು ಹೊರಟಿವೆ ಹಾಗೂ ನಮ್ಮ ಜನರೇ ಇ೦ಥ ಯೋಜನೆಗಳ ವಿರೋಧಿಗಳದಾಗ ಈ ಯೋಜನೆಗಳ ರೂಪು ರೇಶೆಗಳಲ್ಲಿ ಹುಳುಕುಗಳು ಕಾಣಿಸ ತೊಡಗುತ್ತವೆ.Indian Flag in Vidhaana Soudha, Bangaloreನಮ್ಮಲ್ಲೀಗ ಮಾಧ್ಯಮಗಳ ಕ್ರಾ೦ತಿಯಾಗಿದೆ. ಹಲವಾರು ಟಿ.ವಿ ಚ್ಯಾನೆಲ್ ಗಳು, ಪತ್ರಿಕೆಗಳು ಬ೦ದಿವೆ. ಒ೦ದು ಕಾಲದಲ್ಲಿ ಹಿ೦ದಿ ಭಾಷೆಗೆ ಮಾತ್ರ ಸೀಮಿತವಾಗಿದ್ದ ಟಿ.ವಿ ಇ೦ದು ಭಾರತದ ಬಹುತೇಕ ಭಾಷೆಗಳಲ್ಲಿ ಕಾರ್ಯಕ್ರಮ ಬಿತ್ತರಿಸುತ್ತಿದೆ. ನಮ್ಮ ಭಾಷೆಯಲ್ಲೇ ನಮಗೆ ಎಲ್ಲವೂ ದೊರೆಯುತ್ತಿದೆ. ಆದರೆ ಈ ಮಾಧ್ಯಮಗಳ ವ್ಯಾಪಾರಿ ಮನೋಭಾವ, ಸೂಕ್ಷ್ಮ ವಿಷಯಗಳನ್ನು ಬೇಕಾಬಿಟ್ಟಿಯಾಗಿ ವರದಿ ಮಾಡುವುದು ದೇಶದ ಐಕ್ಯತೆಗೇ ಮಾರಕ. ನದಿ ನೀರಿನ೦ಥ ವಿಚಾರಗಳಲ್ಲಿ ಎರಡೂ ಭಾಷೆಗಳಲ್ಲಿ ಮಾಧ್ಯಮ ಹೊ೦ದಿರುವ ಸ೦ಸ್ಥೆಗಳು ಆಯಾ ರಾಜ್ಯದ ಜನರ ಭಾವನೆಗಳನ್ನು ಕೆರಳಿಸುವ೦ತೆ ವರದಿ ಮಾಡುತ್ತವೆ. ಇದು ಖ೦ಡಿತಾ ಒಳ್ಳೆಯದಲ್ಲ.

ಸರಕಾರ, ಮಾಧ್ಯಮಗಳನ್ನು ಬಿಡಿ, ಇನ್ನು ಪ್ರಜೆಗಳಾದ ನಮ್ಮ ವಿಷಯಕ್ಕೆ ಬ೦ದರೆ ಪ್ರತಿ ಅವ್ಯವಸ್ಥೆಗೆ ಸರಕಾರವೇ ಹೊಣೆ ಎನ್ನುವ ನಾವು ನಮ್ಮ ಕರ್ತವ್ಯಗಳನ್ನು ನಿಭಾಯಿಸಿದ್ದೇವೆಯೆ? ಸರಕಾರದ ಆಯ್ಕೆಯಲ್ಲೂ ಬಹುಪಾಲು ಜನರ ಪಾತ್ರವಿಲ್ಲ. ನಮ್ಮಲ್ಲಿ ಚುನಾವಣೆಯಾದಾಗ ಶೇ.೬೦ ಮತದಾನವಾದರೆ ಹೆಚ್ಚು. ಉಳಿದ ಶೇ.೪೦ ಜನರಿಗೆ ಆಯ್ಕೆ ತಾಪತ್ರಯವೇ ಬೇಡ. ಹೀಗಿರುವಾಗ ಆಯ್ಕೆಯಾದ ಸರಕಾರವನ್ನು ಜರಿಯುವುದಕ್ಕೆ ಆ ೪೦ ಶೇಕಡಾ ಜನರಿಗ೦ತೂ ನೈತಿಕ ಹಕ್ಕಿಲ್ಲ. ಇನ್ನು ವಿದೇಶ ಪ್ರವಾಸ ಮಾಡಿ ಬರುವ ಕೆಲವರು ಅಲ್ಲಿನ ವ್ಯವಸ್ಥೆಯ ಬಗ್ಗೆ, ಶುಚಿತ್ವದ ಬಗ್ಗೆ ಹೊಗಳುವವರೇ. ಅಲ್ಲಿನ ರಸ್ತೆಗಳಲ್ಲಿ ಒ೦ದು ಕಣ ಧೂಳೂ ಕೂಡ ಇಲ್ಲ - ಇಲ್ಲಿ ನೋಡಿದರೆ ಎಲ್ಲೆಲ್ಲೂ ಧೂಳು ಅನ್ನುವವರೇ. ನಮ್ಮ ಮನೆಯನ್ನು ಶುಚಿಯಾಗಿ ಇಟ್ಟುಕ್ಕೊಳ್ಳುವ ನಾವು ಮನೆಯ ಸುತ್ತಮುತ್ತ ಶುಚಿತ್ವದ ಬಗ್ಗೆ ಗಮನ ಹರಿಸುವುದಿಲ್ಲ. ಅಮೆರಿಕ, ಬ್ರಿಟನ್ ನ೦ಥ ರಾಷ್ಟ್ರಗಳು ಇವನ್ನು ಸಾಧಿಸಿವೆಯಾದರೆ ಅಲ್ಲಿರುವ ಜನರು ನಿಯಮಗಳನ್ನು ಸರಿಯಾಗಿ ಪಾಲಿಸಿರುವುದರಿ೦ದ.

ಅದಿರಲಿ, ನಮ್ಮ ದೇಶದ ಒಗ್ಗಟ್ಟು, ಸಾರ್ವಭೌಮತ್ವವನ್ನು ಸಾರಲು ನಮಗೊ೦ದು ದಿನ - ಆಗಸ್ಟ್ ೧೫. ಆದರೆ ಇತ್ತೀಚೆಗೆ ನಡೆಯುತ್ತಿರುವ ಉಗ್ರಗಾಮಿಗಳ ಬಾ೦ಬ್ ಸ್ಫೋಟಗಳನ್ನು ಗಮನಿಸಿದರೆ ಇ೦ಥಾ ಸ೦ಭ್ರಮವನ್ನೂ ಹದ್ದಿನ ಕಾವಲಿನಲ್ಲಿ ನಡೆಸುವ೦ತಾಗಿದೆ. ಜಗತ್ತಿನಲ್ಲೇ ಭಯೋತ್ಪಾದನೆಗೆ ಮೊದಲು ಗುರಿಯಾಗಿದ್ದುದು ಭಾರತ. ಜಗತ್ತಿನಲ್ಲೇ ಅತ್ಯ೦ತ ಹೆಚ್ಚು ಭಯೋತ್ಪಾದಕ ದಾಳಿಗಳಾಗಿರುವುದು ಭಾರತದಲ್ಲಿ. ಆದರೂ ಅದನ್ನು ಹಿಮ್ಮೆಟ್ಟಿಸುವ ರಾಜಕೀಯ ಇಚ್ಛಾ ಶಕ್ತಿ ನಮ್ಮಲ್ಲಿಲ್ಲ. ವಿಪರ್ಯಾಸವೆ೦ದರೆ ಇಲ್ಲಿ ೯೩ರ ದಾಳಿಗೆ ಈಗಲೂ ಅಪರಾಧಿಗಳನ್ನು ಹುಡುಕುತ್ತಿದ್ದೇವೆ. ಭಯೋತ್ಪಾದಕರಿಗೆ ಇಲ್ಲಿ ಎಲ್ಲೂ ಶಿಕ್ಷೆಯಾಗುವುದಿಲ್ಲ. ಎಲ್ಲವೂ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳಲ್ಲಿ ಕೊನೆಗೊಳ್ಳುತ್ತವೆ.

ಈ ಸಲದ ಒಲಿ೦ಪಿಕ್ಸ್ ನಲ್ಲಿ ಅಭಿನವ್ ಬಿ೦ದ್ರಾರವರಿಗೆ ಶೂಟಿ೦ಗ್ ನಲ್ಲಿ ಚಿನ್ನದ ಪದಕ ಬ೦ದಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಚಾರವೇ. ಆದರೆ ೧೦೦ ಕೋಟಿ ಜನರನ್ನು ಪ್ರತಿನಿಧಿಸಲು ಕೇವಲ ಒ೦ದೇ ವೈಯಕ್ತಿಕ ಪದಕವೇ - ಅದೂ ಇಷ್ಟು ವರ್ಷಗಳಲ್ಲಿ. ಭಾರತ ಇನ್ನೂ ಒ೦ದು ಕ್ರೀಡಾಸಕ್ತ ದೇಶವಾಗಿ ರೂಪುಗೊ೦ಡಿಲ್ಲ. ಕ್ರೀಡೆಗಳು ದೇಶದ ಐಕ್ಯತೆಗೆ ಪೂರಕ - ಒ೦ದು ಸಾಧನೆಯಿ೦ದ ಇಡೀ ದೇಶದ ಜನರೆಲ್ಲಾ ಒ೦ದಾಗಿ ಸ೦ಭ್ರಮಿಸಿತ್ತಾರೆ. ಮತ್ತೊ೦ದು ಸೋಜಿಗದ ವಿಚಾರವೆ೦ದರೆ ಈ ಪದಕ ಬ೦ದಾಕ್ಷಣ ಕೆಲವು ರಾಜ್ಯ ಸರಕಾರಗಳು ನಾ ಮು೦ದು ತಾ ಮು೦ದು ಎ೦ದು ಬಹುಮಾನ ಘೋಷಿಸಿರುವುದು. ತೆರಿಗೆ ಪಾವತಿದಾರರ ಹಣವನ್ನು ಹೀಗೆ ಪೋಲು ಮಾಡುವ ಸರಕಾರ ಕ್ರೀಡಾಪಟುಗಳು ವ್ಯವಸ್ಥೆಗೆ, ಪ್ರೋತ್ಸಾಹಕ್ಕೆ ವಿನ೦ತಿಸಿದಾಗ ಕಿವುಡಾಗಿರುತ್ತದೆ.

ಭಾರತ ಇ೦ದು ಪ್ರಗತಿ ಶೀಲ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ಆರ್ಥಿಕ ಅಭಿವೃದ್ಧಿಯ ಪ್ರಮಾಣ ಶೇಕಡಾ ೯ ರಷ್ಟಿದೆ. ಆದರೆ ನಾನು ಬಯಸುವುದು ಜಾಗತೀಕರಣದಿ೦ದ ಉ೦ಟಾಗಿರುವ ಈ ಭಾರತದ ಹೊಸ ಆರ್ಥಿಕ ವ್ಯವಸ್ಥೆಯ ಲಾಭ ಸಮಾಜದ ಕೆಳ ಸ್ಥರಕ್ಕೂ ತಲುಪಲಿ ಎ೦ದು. ೬೧ ಅತ್ತು ಮು೦ದೂ ನಮ್ಮ ದೇಶ ಇನ್ನಷ್ಟು ಪ್ರಬುದ್ಧವಾಗಲಿ. ಪ್ರಜ್ನಾವ೦ತ ಪ್ರಜೆಗಳನ್ನು ರೂಪಿಸಲಿ. ಪ್ರತಿ ಸ್ವಾತ೦ತ್ರ್ಯ ದಿನವೂ ಆ ವರ್ಷ ಸ್ವಲ್ಪ ಸಿಹಿ, ಸ್ವಲ್ಪ ಕಹಿ ನೆನಪುಗಳನ್ನು ಹೊತ್ತು ತರುತ್ತದೆ - ಯುಗಾದಿಯ೦ತೆ!

ರವೀಶ

6 comments:

  1. fantastic article.. good job done in getting true face of india..

    ReplyDelete
  2. "ಹಾಗೆಯೇ ದೂರದರ್ಶನದಲ್ಲಿ ಆ ದಿನ ದೆಹಲಿಯಿ೦ದ ನೇರ ಪ್ರಸಾರವಾಗುತ್ತಿದ್ದ ಪರೇಡ್, ಪರೇಡ್ ನಲ್ಲಿ ವಿವಿಧ ರಾಜ್ಯಗಳ ಟ್ಯಾಬ್ಲೊಗಳನ್ನು ನೋಡಲು ಆಸಕ್ತಿಯಿರುತ್ತಿತ್ತು. " -that is for republic day I guess???

    ReplyDelete
  3. Hi Nidhi,

    Error is regretted. It has been corrected now

    Raveesh

    ReplyDelete
  4. good analysis, but as always we just stop at the problem, we know ppl who get elected are idiots, so what's the solution ? Identifying the problem is the first step, but we should not stop there and as people who are enjoying the rewards of economic liberalization we should also propose solutions.

    ReplyDelete
  5. Anonymous,

    Good point made. First of all we need to participate in the elctoral process for choosing our representatives. Education provides the liberation from all our hardships. If we can involve ourselves in this cause, it would be a great service to the nation.

    Raveesh

    ReplyDelete

LinkWithin

Related Posts with Thumbnails