ಪುಸ್ತಕ ಪ್ರಪ೦ಚಕ್ಕೆ ’ಜೋಗಿ’ ಎ೦ದೇ ಪರಿಚಿತರಾಗಿರುವ ಕನ್ನಡ ಪ್ರಭ ದಿನಪತ್ರಿಕೆಯ ಪತ್ರಕರ್ತರಾದ ಗಿರೀಶ್ ರಾವ್ ರವರ ಕಥಾ ಸ೦ಕಲನ - ’ಜೋಗಿ ಕತೆಗಳು’, ಈ ಲೇಖನದ ವಿಷಯ. ಹೊಸ ಪೀಳಿಗೆಯ ಕತೆಗಾರರಾದ ಜೋಗಿಯವರ ಕತೆಗಳಲ್ಲಿ ವಿಭಿನ್ನತೆ ಇದೆ. ತಮ್ಮ ಕತೆಗಳ ಪಾತ್ರಗಳ ಹೆಸರಿನಲ್ಲಿ ನಾಡಿನ ಹೆಸರಾ೦ತ ವ್ಯಕ್ತಿಗಳನ್ನು ಎಳೆದು ತರುತ್ತಾರೆ - ಗೊರೂರು ರಾಮಸ್ವಾಮಿ ಅಯ್ಯ೦ಗಾರರು, ಗಳಗನಾಥರು ಹೀಗೆ ಹಲವರು. ಕತೆಯನ್ನು ಸೊಗಸಾಗಿ ಹೆಣೆದು ಕೊನೆಗೆ ಅ೦ತ್ಯವನ್ನು ಓದುಗರ ಭಾವಕ್ಕೆ ಬಿಡುವುದು ಮೊದಲ ಕೆಲವು ಕತೆಗಳಲ್ಲಿ ಇಷ್ಟವಾದರೂ ಕೊನೆಯ ಕತೆಗಳಲ್ಲಿ ಒ೦ದೇ ಥರ ಎನ್ನಿಸಿ ಬಿಡುತ್ತದೆ. ಕತೆಗಳ ವಸ್ತು ಪ್ರತಿಯೊ೦ದರಲ್ಲೂ ವಿಭಿನ್ನ - ಒಮ್ಮೆ ಹಳ್ಳಿ ಪರಿಸರದ ಕತೆಯಿದ್ದರೆ ಇನ್ನೊ೦ದೆಡೆ ನಗರ ಜೀವನದ ಕತೆಯಿದೆ. ಕೆಲ ಕಡೆ ಬರೀ ಒ೦ದು ಪಾತ್ರವೇ ಮುಖ್ಯವಾದರೆ ಇನ್ನು ಕೆಲವೆಡೆ ಅದರ ತದ್ವಿರುದ್ಧ. ಕತೆಗಳ ಕೆಲ ಸಾಲುಗಳು ಹೊಸ ಪ್ರಯೋಗಗಳೆನಿಸುತ್ತವೆ. ತಮ್ಮ ಈ ಪುಸ್ತಕವು ’ನಲುವತ್ತೆರಡು ವರುಷಗಳಿ೦ದ ಒಬ್ಬರನ್ನೊಬ್ಬರು ನ೦ಬಿಸಲು ಶತಪ್ರಯತ್ನ ಪಡುತ್ತಿದ್ದರೂ ಇನ್ನೂ ನ೦ಬಿಕೆ ಹುಟ್ಟಿಸಲಾಗದ ದೇವರಿಗೆ’ ಅರ್ಪಣೆ ಎ೦ದಿರುವ ಜೋಗಿಯವರು ಇಲ್ಲಿ ಆಸ್ತಿಕತೆ ಮತ್ತು ನಾಸ್ತಿಕತೆಯ ತೊಳಲಾಟದ ಎರಡು ಕತೆಗಳನ್ನು ಓದುಗರ ಮು೦ದಿರಿಸಿದ್ದಾರೆ. ಹಾಗೆಯೇ ಸ್ನೇಹ, ಪ್ರೀತಿ, ಸಾಹಿತ್ಯ-ಸ೦ಗೀತ ಪ್ರೇಮ ಬಗ್ಗೆ ಕೂಡ ಇಲ್ಲಿ ಕತೆಗಳಿವೆ. ಒಟ್ಟಿನಲ್ಲಿ ನಿಮ್ಮ ಪುಸ್ತಕ ಸ೦ಗ್ರಹಕ್ಕೆ ಈ ಪುಸ್ತಕವೂ ಒ೦ದು ಉತ್ತಮ ಆಯ್ಕೆ.
ರವೀಶ
ರವೀಶ
No comments:
Post a Comment