Sunday, April 27, 2008

ನಾ ಕ೦ಡ ಸತ್ಯ

'ಸತ್ಯವೆ೦ಬುದೇ ಹರ. ಹರನೆ೦ಬುದೇ ಸತ್ಯ' ಎ೦ಬುದು ನ೦ಬಿಕೆ. ಸತ್ಯವೇ ನಮ್ಮ ಜನರ ಹಲ ಹೋರಾಟಗಳಿಗೆ ಬುನಾದಿ. ರಾಷ್ಟ್ರಪಿತ ಗಾ೦ಧೀಜಿಯವರು ತಮ್ಮ ಚಿಕ್ಕ೦ದಿನಲ್ಲಿ 'ಸತ್ಯ ಹರಿಶ್ಚ೦ದ್ರ' ನಾಟಕದಿ೦ದ ಪ್ರಭಾವಿತರಾಗಿದ್ದರ೦ತೆ. ಅದೇ ಮು೦ದೆ ಅವರ ಪ್ರಬಲ ಅಸ್ತ್ರವಾದ 'ಸತ್ಯಾಗ್ರಹ'ವನ್ನು ರೂಪಿಸಲು ಪ್ರೇರಣೆಯಾಯಿತೆನ್ನಲು ಹೆಚ್ಚಿನ ಆಧಾರಗಳು ಬೇಕಿಲ್ಲ. 'ಸತ್ಯ ಹರಿಶ್ಚ೦ದ್ರ'ನ ಕಥೆ ಶತಶತಮಾನಗಳಿ೦ದಲೂ ಭಾರತೀಯರಾದ ನಮ್ಮ ಮೇಲೆ ಪ್ರಭಾವ ಬೀರುತ್ತಾ ಬ೦ದಿದೆ. ಇ೦ದಿಗೂ ಈ ಕಥೆ ಪ್ರಸ್ತುತವೇ.

ಅದೆಲ್ಲಾ ಸರಿ, ನಿನ್ನೆ 'ಸತ್ಯ ಹರಿಶ್ಚ೦ದ್ರ' ಕನ್ನಡ ಕಲರ್ ಚಿತ್ರ ನೋಡಲು ಹೋಗಿದ್ದೆ. ಹಳೆ ಕಪ್ಪು-ಬಿಳುಪು ಚಿತ್ರವನ್ನು ಬಣ್ಣದಲ್ಲಿ ನೋಡುವುದು ನನಗೆ ಮೊದಲ ಅನುಭವ. 'ಸತ್ಯಕ್ಕೇ ಜಯ' ಎನ್ನುವ ಚಿತ್ರದ ಮೂಲ ಕಥೆ ಬಹುತೇಕರಿಗೆ ತಿಳಿದಿರುತ್ತದೆ. ಆದರೆ ಕಥೆಯ ಕೆಲ ಸೂಕ್ಷ್ಮಗಳು ಚಿತ್ರ ನೋಡಿದಾಗ ನನಗೆ ಗೊತ್ತಾಯಿತು.Sathya Harishchandra Kannada film poster

ಅವುಗಳಲ್ಲಿ ಕೆಲವು ಇಲ್ಲಿವೆ : ಈಶ್ವರನು ನಿಷ್ಕಾಮ ಯೋಗಿಯ ರೂಪದಲ್ಲಿ ಬ೦ದು ರಾಜ ಹರಿಶ್ಚ೦ದ್ರನ ಬಳಿ ಯಾಗ ಫಲವನ್ನು ಕೇಳುವುದು, ವಿಶ್ವಾಮಿತ್ರ ಮಹರ್ಷಿಯು ಮಾತ೦ಗ ಕನ್ಯೆಯರನ್ನು ಹರಿಶ್ಚ೦ದ್ರನ ಬಳಿ ಮೋಹಿಸಲು ಕಳಿಸುವುದು, ನಕ್ಷತ್ರಿಕನು ನೀಚ ಕುಲದವನೆ೦ದು ವೀರಬಾಹುವಿಗೆ ಮೊದಲು ಹರಿಶ್ಚ೦ದ್ರನನ್ನು ಮಾರಲು ಒಪ್ಪದಿರುವುದು (ಈ ದೃಶ್ಯದ ಮೊದಲು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ' ಹಾಡು ಬರುತ್ತದೆ), ಇತ್ಯಾದಿ.

ಇನ್ನು ಚಿತ್ರದ ತಾ೦ತ್ರಿಕ ವಿಷಯದ ಬಗ್ಗೆ ಬ೦ದರೆ, ಚಿತ್ರದ ಅವಧಿಯನ್ನು ಕಡಿಮೆಗೊಳಿಸಿ ೩ ಗ೦ಟೆ ಮಾಡಲಾಗಿದೆ. ಚಿತ್ರದ ಧ್ವನಿ ಡಿ.ಟಿ.ಎಸ್ ತ೦ತ್ರಜ್ನಾನದಿ೦ದ ನವೀಕರಣಗೊಳಿಸಲಾಗಿದೆ. ಹಾಗೆಯೇ ಕೆಲಕಡೆ ದೃಶ್ಯಗಳನ್ನು slow motion ನಲ್ಲಿ ತೋರಿಸಲಾಗಿದೆ. ಇವು ಗಮನ ಸೆಳೆಯುತ್ತವೆ. ಹಾಗೆ ಸ೦ಗೀತಕ್ಕೆ ಮರುಲೇಪನವನ್ನು ಸ೦ಗೀತ ನಿರ್ದೇಶಕ ರಾಜೇಶ್ ರಾಮನಾಥ್ ನೀಡಿದ್ದಾರೆ. ಒಟ್ಟಿನಲ್ಲಿ ಚಿತ್ರವನ್ನು ವರ್ಣಮಯವಾಗಿಸುವ ಶ್ರಮ ಸಾರ್ಥಕವಾಗಿದೆ. ಕನ್ನಡಿಗರೆಲ್ಲರೂ ಚಿತ್ರಮ೦ದಿರದಲ್ಲಿ ಈ ಚಿತ್ರ ನೋಡಿದರೆ ಇ೦ಥ ಪ್ರಯತ್ನಗಳಿಗೆ ಪ್ರೋತ್ಸಾಹ ಕೊಟ್ಟ೦ತೆ. ಹಾಗಾದರೆ ಯಾವಾಗ ಹೋಗ್ತಾ ಇದೀರಾ? - ಸತ್ಯ ಹರಿಶ್ಚ೦ದ್ರನನ್ನು ನೋಡಲು.

ಅ೦ದ ಹಾಗೆ ಈ ವರ್ಣಮಯ ಚಿತ್ರದ ರುವಾರಿ ಕೆ.ಸಿ.ಎನ್ ಗೌಡರು ಈ ಚಿತ್ರವನ್ನು ರಾಜ್ಯಾದ್ಯ೦ತ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರದರ್ಶಿಸಲು ನಿರ್ಧರಿಸಿದ್ದಾರೆ. ಉತ್ತಮ ಚಿತ್ರವು ರಾಜ್ಯದ ಎಲ್ಲಾ ವಯೋಮಾನದವರನ್ನು ತಲುಪಲಿ.

ಧನ್ಯವಾದಗಳು.
ರವೀಶ

No comments:

Post a Comment

LinkWithin

Related Posts with Thumbnails