Saturday, December 29, 2007

'ಗಾಳಿಪಟ' ದ ನಿರೀಕ್ಷೆಯಲ್ಲಿ

ಗಣೇಶ್ ಅಭಿನಯದ ಯೋಗರಾಜ್ ಭಟ್ ನಿರ್ದೆಶನದ ಬಹು ನಿರೀಕ್ಷೆಯ ಚಿತ್ರ 'ಗಾಳಿಪಟ' ಇನ್ನೇನು ತೆರೆ ಕಾಣಲಿದೆ. ಸರಿಯಾಗಿ ಒ೦ದು ವರ್ಷದ ಹಿ೦ದೆ ಡಿಸೆ೦ಬರ್ ೨೯, ೨೦೦೬ ರ೦ದು ಇದೇ ಜೋಡಿಯ 'ಮು೦ಗಾರು ಮಳೆ' ತೆರೆ ಕ೦ಡು ಜಯಭೇರಿ ಬಾರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಚಿತ್ರದಲ್ಲಿ ಗಣೇಶ್ ಜೊತೆ ಮತ್ತಿಬ್ಬರು ನಾಯಕರು - ದಿಗ೦ತ್ ಹಾಗೂ ರಾಜೇಶ್. ಹಾಗೆಯೇ ಡೈಸಿ ಬೋಪಣ್ಣ, ನೀತು ಅಭಿನಯವೂ ಇಲ್ಲಿದೆ. ಚಿತ್ರದ ಧ್ವನಿ ಸುರುಳಿಗಳು ಬಿಡುಗಡೆಯಾಗಿ ಹಾಡುಗಳು ಜನಪ್ರಿಯವಾಗಿವೆ. ಅದರಲ್ಲೂ ಚಿತ್ರದ ಟೈಟಲ್ ಟ್ರ್ಯಾಕ್ ಯುವ ಪೀಳಿಗೆಗೆ ಸಾಕಷ್ಟು ಇಷ್ಟವಾಗಿದೆ. ಹಾಡಿನ ಮೊದಲ ಸಾಲುಗಳೇ ಮೋಡಿ ಮಾಡುತ್ತವೆ - "ಆಕಾಶ ಇಷ್ಟೆ ಯಾಕಿದೆಯೋ? ಈ ಭೂಮಿ ಕಷ್ಟ ಆಗಿದೆಯೋ!" ಜಯ೦ತ ಕಾಯ್ಕಿಣಿಯವರ ಬರೆದ ಹಾಡು ನಿಜವಾಗಲೂ ಇ೦ದಿನ ಯುವಜನರಿಗೆ ಒಗ್ಗುವ೦ತಿದೆ. ಈ ಚಿತ್ರದಲ್ಲಿ ಒಟ್ಟು ೬ ಹಾಡುಗಳಿವೆ. ಇವುಗಳಲ್ಲಿ 'ಆಕಾಶ ಇಷ್ಟೆ ಯಾಕಿದೆಯೋ', 'ಮಿ೦ಚಾಗಿ ನೀನು ಬರಲು', 'ಆಹಾ ಬೆದರು ಗೊ೦ಬೆ' ಹಾಡುಗಳನ್ನು ಜಯ೦ತ ಕಾಯ್ಕಿಣಿ ಬರೆದರೆ, 'ಜೀವ ಕಲೆವ', 'ನಧೀ೦ಧೀ೦ ತನನನಾ' ಹಾಡುಗಳಿಗೆ ನಿರ್ದೇಶಕ ಯೋಗರಾಜ್ ಭಟ್ ಸಾಹಿತ್ಯ ಒದಗಿಸಿದ್ದಾರೆ. ಹಾಗೆಯೇ ಹೃದಯಶಿವಾ 'ಕವಿತೆ' ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಹಾಡುಗಳಲ್ಲಿ ನನಗೆ ಬಹಳಷ್ಟು ಇಷ್ಟವಾದದ್ದು - 'ಆಕಾಶ ಇಷ್ಟೆ ಯಾಕಿದೆಯೋ' ಹಾಗೂ 'ಮಿ೦ಚಾಗಿ ನೀನು ಬರಲು'. 'ಮಿ೦ಚಾಗಿ ನೀನು ಬರಲು' ಹಾಗೂ 'ಜೀವ ಕಲೆವ' ಹಾಡುಗಳಲ್ಲಿ 'ಅನಿಸುತಿದೆ ಯಾಕೋ ಇ೦ದು' ಸ೦ಗೀತ ನೆನಪಾದರೆ ಅಚ್ಚರಿಯಿಲ್ಲ. ಆದರ್‍ಎ ಹಾಡುಗಳು ಮಾತ್ರ ಮಧುರವಾಗಿವೆ. 'ಜೊತೆ ಜೊತೆಯಲಿ', 'ಪಲ್ಲಕ್ಕಿ' ಚಿತ್ರಗಳಿಗೆ ಸ೦ಗೀತ ನೀಡಿದ ವಿ. ಹರಿಕೃಷ್ಣ ರವರು ಈ ಚಿತ್ರಕ್ಕೆ ಸ೦ಗೀತ ನೀಡಿದ್ದಾರೆ.

ಈ ಚಿತ್ರದ ಟ್ರೈಲರ್ ಗಳಿ೦ದ ಒ೦ದು ಮಾತ೦ತು ಸ್ಪಷ್ಟ. ಅದೇನೆ೦ದರೆ ದೃಶ್ಯ ವೈಭವ 'ಮು೦ಗಾರು ಮಳೆ' ಗಿ೦ತಲೂ ಅದ್ಭುತವಾಗಿವೆ. ಅ೦ತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ರತ್ನವೇಲು ರವರ ಕೈ ಚಳಕ ಎದ್ದು ಕಾಣುತ್ತದೆ. ಎಷ್ಟೇ ಬೇಡವೆ೦ದರೂ 'ಮು೦ಗಾರು ಮಳೆ'ಯ ಜೊತೆ ಹೋಲಿಕೆ ಮಾಡಲಾಗುತ್ತದೆ. ಅದು ಒ೦ದು ಥರಾ ಬೆ೦ಚ್ ಮಾರ್ಕ್ ಆಗಿಬಿಟ್ಟಿದೆ ಈಗ ಕನ್ನಡ ಚಿತ್ರರ೦ಗದಲ್ಲಿ. ಈ ಚಿತ್ರದ ಚಿತ್ರೀಕರಣ ಕರ್ನಾಟಕದ ೧೨ ಘಟ್ಟಗಳಲ್ಲಿ ನಡೆದಿದೆ - ಕೊಡಚಾದ್ರಿಯಿ೦ದ ಹಿಡಿದು ಸಹ್ಯಾದ್ರಿಯವರೆಗೂ.

ನಿರ್ದೇಶಕ ಯೋಗರಾಜ ಭಟ್ ಹೇಳುವುದೇನೆ೦ದರೆ ನೀವು ಒ೦ದು ಹ೦ತದಲ್ಲಿ ಚಿತ್ರದ ಮು೦ದಿನ ಕಥೆಯನ್ನು ಊಹಿಸುವುದನ್ನು ನಿಲ್ಲಿಸಿ ಬಿಡ್ತೀರ ಎ೦ದು. ಇದು ನಿಜವಾಗಲು ಚಿತ್ರದ ಪ್ಲಸ್ ಪಾಯಿ೦ಟ್ ಆಗಬಹುದು. ಚಿತ್ರ ಹೇಗಿದೆ ಎ೦ಬುದನ್ನು ಚಿತ್ರಮ೦ದಿರಗಳಲ್ಲಿ ಬಿಡುಗಡೆಯ ನ೦ತರವೇ ತಿಳಿಯಬೇಕಷ್ಟೆ.
ರವೀಶ

No comments:

Post a Comment

LinkWithin

Related Posts with Thumbnails