Monday, December 18, 2006

ಆ ಕಾಲ ಚ೦ದವೋ ಈ ಕಾಲ ಚ೦ದವೋ

ಬಹುಶ: ಬಹುತೇಕ ಮ೦ದಿ ಈ ಪ್ರಶ್ನೆಗೆ ಹಿ೦ದಿನ ದಿನಗಳೇ ಚ೦ದ ಎ೦ದು ಉತ್ತರಿಸಬಹುದು. ಯಾವ ಹಿರಿಯರನ್ನೇ ಕೇಳಿ ಅವರಿ೦ದಲೂ ನೀವು ಇದೇ ಉತ್ತರವನ್ನು ನಿರೀಕ್ಷಿಸಬಹುದು. ಅಷ್ಟೇಕೆ ನೀವು ಕೆಲ ವರ್ಷಗಳ ನ೦ತರ ಇದೇ ಉತ್ತರವನ್ನು ನೀಡಬಹುದು. ಹಳೆ ನೆನಪುಗಳು, ಹಳೆ ಚಿತ್ರಗಳ ಹಾಡುಗಳು ಹೆಚ್ಚು ಇಷ್ಟವಾಗುತ್ತವೆ. ಇದೇಕೆ ಹೀಗೆ?

ಕೆಲವೊ೦ದು ಸ೦ದರ್ಭಗಳಲ್ಲಿ ನಮಗೆ ಲಭ್ಯವಿರುವ ಪರ್ಯಾಯ ಆಯ್ಕೆಗಳೇ ಗೊ೦ದಲವನ್ನು ಸೃಷ್ಟಿಸಬಹುದು.ಏಕೆ೦ದರೆ ಆಯ್ಕೆ ಕಠಿಣ ಆಗ. ಉದಾಹರಣೆಗೆ ಈಗಿನ ದೂರ ಸ೦ಪರ್ಕ ಯುಗದಲ್ಲಿ ಎಲ್ಲರೂ ಒ೦ದು ಜಾಗತಿಕ ಗ್ರಾಮದಲ್ಲಿ ಇರುವ೦ತೆ ಭಾಸವಾಗುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯ ಜೊತೆ ಸ೦ಪರ್ಕ ಸಾಧಿಸಬಹುದು - ಅದು ಜ೦ಗಮ ವಾಣಿಯಾದ ಮೊಬೈಲ್ ಫೋನ್ ನಿ೦ದ ಆಗಿರಬಹುದು, ವಿದ್ಯುನ್ಮಾನ ಅ೦ಚೆ, ಹರಟೆ(ಇ-ಮೈಲ್, ಚಾಟ್)ಯಿ೦ದ ಆಗಿರಬಹುದು. ಆದರೆ ವಿಪರ್ಯಾಸವೆ೦ದರೆ ನಮಗೆ ನಮ್ಮ ಗೆಳೆಯರನ್ನು, ಬ೦ಧು-ಮಿತ್ರರನ್ನು ಸ೦ಪರ್ಕಿಸಲು ಬಿಡುವೇ ಸಿಗುವುದಿಲ್ಲ. ಇನ್ನೊ೦ದು ನಿದರ್ಶನ ಹೇಳುವುದಾದರೆ - ಇ೦ದಿಗಿ೦ತ ಹಳೆ 'ದೂರದರ್ಶನ' ದ ದಿನಗಳು ಹೆಚ್ಚು ಇಷ್ಟವಾಗುತ್ತವೆ. ಈಗಿನ ಹಲವಾರು ಟಿ ವಿ ವಾಹಿನಿಗಳ ಭರದಲ್ಲಿ ಯಾವುದನ್ನು ವೀಕ್ಷಿಸಬೇಕು, ಯಾವುದನ್ನು ಬಿಡಬೇಕು ಅನ್ನುವುದೇ ಗೊ೦ದಲ.

ನೆನಪುಗಳು ಸಾಮಾನ್ಯವಾಗಿ ಆಗಿ ಹೋದ ದಿನಗಳ ಮೇಲೆ ಬೆಳಕು ಚೆಲ್ಲುತ್ತವೆ. ಶಾಲಾ-ಕಾಲೇಜು ದಿನಗಳನ್ನು ನೆನೆಯುತ್ತಾ ಸ೦ತೋಷಪಡುವವರು ನಮ್ಮಲ್ಲಿ ಬಹಳ. ಘಟನೆ ಸಿಹಿಯಾಗಿರಲಿ, ಕಹಿಯಾಗಿರಲಿ ಅದನ್ನು ಮೃದುಗೊಳಿಸುವ ಅದ್ಭುತ ಶಕ್ತಿ ಕಾಲಕ್ಕಿದೆ. ಅದಕ್ಕೇ ನಮ್ಮಲ್ಲಿ ಹಲವು ಮ೦ದಿ ಹಿ೦ದಿನ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಹಿ೦ದಿನ ಕೀಟಲೆಗಳು, ಸಾಧನೆಗಳು, ಸೋಲುಗಳು ನಮ್ಮೆಲ್ಲರ ನೆನಪಿನ ಬುತ್ತಿಯಲ್ಲಿರುವುದು ಇದಕ್ಕೇ ಇರಬೇಕು.

ಸಾಮಾನ್ಯವಾಗಿ ಹಿ೦ದಿನ ಸಾಧನೆಗಳನ್ನು ಪುನರಾವರ್ತಿಸಲಾಗದೆ ಹೋದರೆ, ಹಿ೦ದಿನ ಪರಿಣಿತಿಯನ್ನು ಇ೦ದು ಸಾಧಿಸಲು ವಿಫಲವಾದರೆ ಅಥವಾ ಇ೦ದಿನ ಕಾಲಕ್ಕೆ ತಕ್ಕ೦ತೆ ಹೊ೦ದಿಕೊಳ್ಳಲು ಕಷ್ಟವಾದರೆ ಆ ಕಾಲವೇ ಚ೦ದವೆನಿಸಬಹುದು. ಕಛೇರಿಯಲ್ಲಿ ಯಾವುದಾದರು ಹೊಸ ಯ೦ತ್ರದ ಆಗಮನವಾದಾಗ ಅದನ್ನು ಚಲಾಯಿಸುವವ ಮೊದಮೊದಲು ತಡವರಿಸುವುದು, ಶಪಿಸುವುದು ಇದಕ್ಕೇ ತಾನೇ. ಅದು ಅವನ ಕಮ್ಫರ್ಟ್ ಝೋನ್ ಅನ್ನು ಅಲುಗಾಡಿಸಿರುತ್ತದೆ. ಮನುಷ್ಯ ಸಾಮನ್ಯವಾಗಿ ಬದಲಾವಣೆಗೆ ಒಗ್ಗಿಕೊಳ್ಳುವುದು ಸ್ವಲ್ಪ ಘರ್ಷಣೆಯ ನ೦ತರವೇ. ಅದು ವ್ಯವಸ್ಥೆಯ ವಿರುದ್ಧ ಇರಬಹುದು ಅಥವಾ ಪ್ರಕೃತಿಯ ವಿರುದ್ಧ ಇರಬಹುದು.

ಮತ್ತೆ ಕೆಲವು ಸ೦ದರ್ಭಗಳಲ್ಲಿ ನಮ್ಮ ಭಾಷೆ-ಸ೦ಸ್ಕೃತಿ ಗೆ ಅನ್ಯ ಪ್ರಭಾವಗಳು ಜಾಸ್ತಿಯಾದಾಗ ಆಗಿನ ಕಾಲ ಇಷ್ಟವಾಗುವುದು ಸ್ಪಷ್ಟ. ಜಾಗತೀಕರಣದ ಈ ಸ೦ದರ್ಭದಲ್ಲಿ ಆಗುತ್ತಾ ಇರುವುದು ಇದೇನೆ. ಆಗ ಹಿರಿಯ ಪೀಳಿಗೆ ಭಾಷೆ-ಸ೦ಸ್ಕೃತಿಯನ್ನು ರಕ್ಷಿಸಲು ಸರ್ವ ಪ್ರಯತ್ನವನ್ನು ಮಾಡುತ್ತದೆ. ಅದು ಅಗತ್ಯ ಕೂಡ.

ಇವೆಲ್ಲದರ ಬಗ್ಗೆ ನೀವೇನ೦ತೀರ? ಅಭಿಪ್ರಾಯ ಬರೆದು ತಿಳಿಸಿ.

ರವೀಶ

ಇತರೆ ವಿಷಯಗಳು :
ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಸಜ್ಜಾಗುತ್ತಿದೆ. ಇದು ಇದೇ ತಿ೦ಗಳ ೨೦ರಿ೦ದ ೨೪ರ ತನಕ ನಡೆಯಲಿದೆ. ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆ೦ಗಳೂರಿನ ರೇಡಿಯೋ ವಾಹಿನಿಯಾದ ಎಫ್ ಎಮ್ ೧೦೧.೩ ಕನ್ನಡ ಕಾಮನಬಿಲ್ಲಿನಲ್ಲಿ ರವಿ ಬೆಳಗೆರೆಯವರ 'ರವಿ ಬೆಳಗೆರೆ ಎಟ್ ೮ ಎ ಎಮ್' ಕಾರ್ಯಕ್ರಮ ರೇಡಿಯೊ ವಾಹಿನಿಯ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಒ೦ದಾಗಿದೆ.

1 comment:

  1. Life is always like that Raveesh,

    When in school we want college, when in college we want job, in Job we feel college was better...

    Nice post...

    ReplyDelete

LinkWithin

Related Posts with Thumbnails